ಫ್ರಾನ್ಸಿನ ಚಿತ್ರಕಲೆ - 

	ಗಾತಿಕ್ ಯುಗದಲ್ಲಿ ಫ್ರಾನ್ಸಿನ ಚಿತ್ರಕಲೆ ಅಷ್ಟಾಗಿ ಪ್ರಬುದ್ಧಮಾನವಾಗಿರಲಿಲ್ಲವೆಂದು ಹೇಳಬಹುದು. ಕ್ರೈಸ್ತಮಂದಿರಗಳಲ್ಲಿ ಗಾಜುಗಳ ಮೇಲೆ ವಿವಿಧ ಬಣ್ಣಗಳನ್ನು ಲೇಪಿಸಿ ಬೆಳಕನ್ನು ನಿಯಂತ್ರಿಸಲಾಗುತ್ತಿತ್ತು. ಬಣ್ಣದ ಗಾಜಿನ ಫಲಕಗಳ ಮೂಲಕ ಪ್ರವೇಶಿಸಿದ ಬೆಳಕು ದಿವ್ಯಜ್ಯೋತಿಯ ಸಂಕೇತವೆಂದೇ ಭಾವಿಸಲಾಗಿತ್ತು. ನಾಲ್ಕನೆಯ ಶತಮಾನದಿಂದಲೇ ವರ್ಣಲೇಪಿತ ಗಾಜಿನ ಬಳಕೆ ಇದ್ದಿತಾದರೂ 11-12ನೆಯ ಶತಮಾನಗಳಲ್ಲಿ ಅದನ್ನು ಬಳಸಿಕೊಂಡು ಧರ್ಮಮಂದಿರಗಳನ್ನು ಅಲಂಕರಿಸುವ ತಂತ್ರವನ್ನು ಪಕ್ವಗೊಳಿಸಲಾಯಿತು. ಗಾತಿಕ್ ಚಿತ್ರಕಲೆಯಲ್ಲೆ ಈ ವರ್ಣಲೇಪಿತ ಗಾಜಿನ ಉಪಯೋಗ ವಿಶಿಷ್ಟವಾಗಿದ್ದು. ವಿವಿಧ ಬಣ್ಣದ ಗಾಜಿನ ಚೂರುಗಳನ್ನು ಕಬ್ಬಿಣ ಅಥವಾ ಸೀಸದ ಚೌಕಟ್ಟುಗಳಲ್ಲಿ ಅನೇಕ ವಿನ್ಯಾಸಗಳಲ್ಲಿ ಕಲಾತ್ಮಕವಾಗಿ ಜೋಡಿಸಲಾಗುತ್ತಿತ್ತು. ಹಾಗೆ ಮಾಡುವಾಗ ಹಲವು ಬಾರಿ ಮಾನವ, ಪಕ್ಷಿ ಅಥವಾ ಪ್ರಾಣಿಗಳ ರೂಪಗಳನ್ನು ಸಹ ನಿರ್ಮಿಸಲಾಗುತ್ತಿತ್ತು. ಚಾರ್ಟರ್ಸ್‍ನ ನಾಟರ್ ಡೇಮನ್ ಕಿಟಕಿಗಳಲ್ಲಿ ಅಂಥ ನಿರೂಪಣಾತ್ಮಕ ವಸ್ತುಗಳುಳ್ಳ ಚಿತ್ರಗಳನ್ನು ಕಾಣಬಹುದು. ಕಟ್ಟಡಕ್ಕೆ ಬಳಸಿದ ಕಲ್ಲಿನ ಚೌಕಟ್ಟಿನೊಳಗೆ ಅಡಕವಾದ ಈ ಪ್ರಕಾಶಮಾನವಾದ ಪಾರದರ್ಶಕ ವರ್ಣ ಚಿತ್ರಗಳು ಅಂತರಿಕ್ಷದಲ್ಲೆ ತೇಲಾಡುತ್ತಿರುವಂತೆ ಭಾಸವಾಗುತ್ತಿದ್ದುವು. ಗಾತಿಕ್ ಶಿಲ್ಪಕಲೆಗೆ ಈ ಚಿತ್ರಕಲೆ ಅನಿವಾರ್ಯವೆಂಬಂತೆ ತೋರುತ್ತಿತ್ತು.

	ಆ ಕಾಲದಲ್ಲಿ ಫ್ರಾನ್ಸ್ ಸೇರಿದಂತೆ ಯೂರೋಪಿನ ಹಲವಾರು ಪ್ರದೇಶಗಳಲ್ಲಿ ವರ್ಣಚಿತ್ರಗಳ ಹಸ್ತಪ್ರತಿಗಳು ಅಧಿಕವಾಗಿ ನಿರ್ಮಾಣಗೊಂಡವು.

	ಉನ್ನತ ಗಾತಿಕ್ ಶೈಲಿಯ ಕಾಲದಲ್ಲಿ ಪ್ರಾರ್ಥನಾಮಂದಿರಗಳಲ್ಲಿಯ ವರ್ಣಲೇಪಿತ ಗಾಜಿನ ಕಿಟಕಿಗಳು ಹೆಚ್ಚು ಆಕರ್ಷಕವಾಗಿದ್ದುವು. ಚಾರ್ಟರ್ಸನ ಚಿತ್ರಶಿಲ್ಪಿಗಳ ಪ್ರಸಿದ್ಧಿ ಎಲ್ಲ ಕಡೆಯೂ ಹರಡಿತ್ತು. ಸಾಧ್ಯವಾದಲ್ಲೆಲ್ಲ ಮಂದಿರ ನಿರ್ಮಾಣ ಮತ್ತು ಅಲಂಕರಣ ಕೆಲಸಗಳಿಗೆ ಅವರನ್ನು ಆಹ್ವಾನಿಸಲಾಗುತ್ತಿತ್ತು. ಕ್ರಮೇಣ ದೊಡ್ಡದಾಗುತ್ತಿದ್ದ ಈ ಕಿಟಕಿಗಳ ಪ್ರಮಾಣಕ್ಕೆ ಅನುಗುಣವಾಗಿ ಬಣ್ಣಗಳ ವೈವಿಧ್ಯ ಮಾರ್ಪಾಡಾಗುತ್ತ ಬಂದಿತು. ಚಾರ್ಟರ್ಸನ ಕಿಟಕಿಗಳ ತಳಭಾಗದಲ್ಲಿ ಆ ಕೆಲಸಗಳಿಗೆ ಧನ ಸಹಾಯಮಾಡಿದ ವ್ಯಕ್ತಿಗಳ, ಸಂಸ್ಥೆಗಳ ಬಗ್ಗೆ ಮಾಹಿತಿಗಳನ್ನು ಕೊಡಲಾಗುತ್ತಿತ್ತು. ಹೆಚ್ಚು ಧನಸಂಗ್ರಹವಾದಂತೆ ಚತುರರಾದ ಚಿತ್ರಕಾರರನ್ನು ನೇಮಿಸಿಕೊಳ್ಳುತ್ತಿದ್ದುದರಿಂದ ಕಲಾವಿದರಿಗೆ ಪ್ರೋತ್ಸಾಹ ದೊರಕುತ್ತಿತ್ತು.

	ಹಸ್ತಪ್ರತಿಗಳ ಮೇಲಿನ ವರ್ಣಚಿತ್ರ ಅಥವಾ ಗಾಜುಲೇಪದ (ಎನಾಮೆಲ್) ಕೃತಿಗಳು ಕ್ರಮೇಣ ರೊಮನೆಸ್ಕ್ ಪದ್ಧತಿಯಿಂದ ಹೊಸಶೈಲಿಯತ್ತ ಬದಲಾವಣೆಗೊಂಡವು. ಹಸ್ತಪ್ರತಿಗಳ ಮೇಲೆ ಚಿನ್ನದ ಹಿನ್ನೆಲೆಯಲ್ಲಿ ಹಲವು ಬಣ್ಣಗಳ ಚಿತ್ರಗಳನ್ನು ಬಿಡಿಸುವುದರ ಮೂಲಕ ಅವನ್ನು ಹೆಚ್ಚು ಆಕರ್ಷಕಗೊಳಿಸಲಾಗುತ್ತಿತ್ತು. ಚಿತ್ರಗಳನ್ನು ಹೆಚ್ಚು ಎಚ್ಚರಿಕೆಯಿಂದ ರೂಪಿಸುವುದಲ್ಲದೆ ನೀತಿಬೋಧಕ ಮತ್ತು ರಂಜನಾತ್ಮಕ ವಸ್ತುನಿರೂಪಣೆಗೆ ಗಮನ ನೀಡಲಾಗುತ್ತಿತ್ತು. ಗಾತಿಕ್ ಶೈಲಿಯ ಅಂತ್ಯ ಕಾಲದಲ್ಲಿ ಈ ವರ್ಣಚಿತ್ರಗಳು ಹಲ ಬದಲಾವಣೆಗಳನ್ನು ಪಡೆದುವು. 1256ರಲ್ಲಿ ರಚಿಸಲಾದ ಸೇಂಟ್ ಲೂಯಿಯ ಸಾಲ್ಟರ್ ಹಸ್ತಪ್ರತಿಯಲ್ಲಿರುವ ಚಿತ್ರಗಳು ರಮ್ಯವಾಗಿವೆ. ವಿಲಂಬಿತ ಪ್ರಮಾಣವುಳ್ಳದಾಗಿಯೂ ಇವೆ.

	ಗಾತಿಕ್ ಶೈಲಿಯ ಅಂತ್ಯದಲ್ಲಿ ರಾಜಾಸ್ಥಾನಗಳ ಜೀವನಶೈಲಿಯನ್ನು ರಮ್ಯವಾಗಿ ನಿರೂಪಿಸಲಾಯಿತು. ಅದು ಫ್ರಾನ್ಸಿಗಿಂತ ಇಟಲಿಯಲ್ಲಿ ಗಮನಾರ್ಹವಾಗಿ ಬೆಳೆಯಿತು. ಆದರೆ ಅದರ ಉಗಮ ಮತ್ತು ವಿಕಾಸವಾದದ್ದು ಫ್ರಾನ್ಸಿನಲ್ಲಿ ಎಂಬುದನ್ನು ಮರೆಯಲಾಗದು.

	ಬೌದ್ಧಿಕಕ್ರಾಂತಿಯುಗ (15ನೆಯ ಶತಮಾನ) : ಆ ಕಾಲದಲ್ಲಿ ಫ್ರಾನ್ಸಿನಲ್ಲಿ ಕಲೆಗೆ ಪ್ರೋತ್ಸಾಹ ನೀಡುವ ಶ್ರೀಮಂತ ಮನೆತನ ಫ್ಲಾಂಡರ್ಸ್ ಮನೆತನದೊಂದಿಗೆ ವೈವಾಹಿಕ ಸಂಬಂಧ ಬೆಳೆಸಿಕೊಂಡುದರಿಂದ ಕಲೆಯತ್ತ ಹೆಚ್ಚು ಗಮನ ಹರಿಸುವಂತಾಯಿತು. ಫ್ರಾನ್ಸಿನ ಕಲೆಗಾರರು ಬೆರ್ರಿ. ಬೌರ್ಬಾನ್ ಮತ್ತು ನಿಮೂರ್ಸ್ ಶ್ರೀಮಂತರ ಆಶ್ರಯ ಪಡೆದರು. ಅವರ ಪ್ರಯತ್ನಗಳಿಂದ ಪ್ರಾದೇಶಿಕ ಕಲಾಶೈಲಿಗಳು ಸ್ವಲ್ಪಮಟ್ಟಿಗೆ ಬೆಳೆದುವು. ಫ್ರಾನ್ಸಿನ ಚಿತ್ರಕಾರರು ಪ್ರಕೃತಿಚಿತ್ರಗಳನ್ನು ಬಿಡಿಸುತ್ತಿದ್ದರೂ ಜರ್ಮನ್ ಮತ್ತು ಇಟಲಿಯ ಚಿತ್ರಕಾರರಂತೆ ಸೂಕ್ಷ್ಮವಿವರಗಳಿಗೆ ಗಮನನೀಡುತ್ತಿರಲಿಲ್ಲ. ಗಾಂಭೀರ್ಯ ಮತ್ತು ಸ್ಥಾಯೀಭಾವಗಳಿಗೆ ಪ್ರಾಧಾನ್ಯ ನೀಡಿದ್ದರಿಂದ ಅವರ ಕೃತಿಗಳಿಗೆ ಮನೋಹರತೆ ದೊರಕಿತ್ತು. ಆ ವರ್ಣಚಿತ್ರಗಳಿಗೆ 12-13ನೆಯ ಶತಕಗಳ ವಾಸ್ತುಶಿಲ್ಪದ ಹಿನ್ನೆಲೆಯನ್ನೊದಗಿಸಲಾಗಿತ್ತು.

	ಜೀನ್ ಫೊಕ್ವೆ (1416-80): ಆಗಿನ ಫ್ರಾನ್ಸಿನ ಖ್ಯಾತ ಚಿತ್ರಕಾರ. ಚಾಲ್ರ್ಸ್-7, ನಿಮೂರ್ಸ್‍ನ ಮತ್ತು ಎಟೀನ್ ಷೆವಾಲಿಯರ್ ಶ್ರೀಮಂತರ ಆಶ್ರಯದಲ್ಲಿದ್ದ ಈತನ ಕೃತಿಗಳಲ್ಲಿ ಇಟಾಲಿಯನ್ ಪ್ರಭಾವ ಎದ್ದು ಕಾಣುತ್ತದೆ. ಈತನ ಕೃತಿಗಳಲ್ಲಿ ಕನ್ಯೆಯ ವಿವಾಹ ಮತ್ತು ವಿಸಿಟೇಷನ್ ಗಮನಾರ್ಹವಾದವು. ಆ ಭವ್ಯ ಕೃತಿಗಳಲ್ಲಿ ಫ್ಲೆಮಿಷ್ ಗ್ರಹಣಶಕ್ತಿ ಇಟಾಲಿಯನ್ ನಿರೂಪಣಾ ಸಾಮಥ್ರ್ಯಗಳೊಂದಿಗೆ ಫ್ರೆಂಚ್ ಗಾತಿಕ್ ವಾಸ್ತುಶಿಲ್ಪದ ಲಕ್ಷಣಗಳನ್ನು ಅಳವಡಿಸಿಕೊಂಡಿರುವುದನ್ನು ಕಾಣಬಹುದು. ಆತನದೇ ಆದ ಆಂಟ್ವರ್ಪ್ ವಸ್ತು ಸಂಗ್ರಹಾಲಯದಲ್ಲಿರುವ `ದೇವದೂತರೊಡನಿರುವ ಮ್ಯಾಡೋನಾ ಮತ್ತು ಶಿಶು (ಸು. 1450)' ಮತ್ತು ನೂಆನ್ಸ್ ಚರ್ಚಿನಲ್ಲಿರುವ ಪಿಏಟಾ (ಸುಮಾರು 1470-75) ಕೃತಿಗಳಲ್ಲಿ ಸಂಪ್ರದಾಯವಾದ ಚಲನೆಯಿಲ್ಲದ ರಚನೆಗಳನ್ನು ಕಾಣಬಹುದು. ಸಮಕಾಲೀನ ಇಟಲಿಯಲ್ಲಿ ಪ್ರಚಲಿತವಿದ್ದ ಮಾನವೀಯತೆಯ ಸ್ಪರ್ಶ ಅವುಗಳಲ್ಲಿ ಇಲ್ಲ. ಇದೇ ವರ್ಗದ ಇತರ ಕೃತಿಗಳೆಂದರೆ ಎಂಗ್ವೆರಾ ಚರಾನ್‍ಟನ್‍ನ ಕನ್ಯೆಯ ಪಟ್ಟಾಭಿಷೇಕ (1453-54) ಮತ್ತು ಲೂರ್ ಸಂಗ್ರಹಾಲಯದಲ್ಲಿರುವ ಅವಿನಾನ್ ಶೈಲಿಯ ಸುಪ್ರಸಿದ್ಧ ಪಿಏಟಾ (1460). ಆದರೆ ಫ್ರಾನ್ಸ್ ಇಟಲಿಯನ್ನು ಆಕ್ರಮಿಸಿದಾಗ ಅಲ್ಲಿಂದ ವಲಸೆ ಬಂದ ಇಟಲಿಯ ಕಲೆಗಾರರ ಪ್ರಭಾವದಿಂದ ಫ್ರೆಂಚ್ ಚಿತ್ರಕಲೆ ಇಟಲಿಯ ಚಿತ್ರಕಲೆಯ ಪ್ರತಿರೂಪವಾಯಿತೆಂದು ಹೇಳಬಹುದು.

	16ನೆಯ ಶತಮಾನದ ಫ್ರಾನ್ಸಿನಲ್ಲಿ ಇಟಲಿಯ ಇಲ್ ರೊಸ್ಸೋ, ಪ್ರಿಮಾಟಿಷಿಯೋ ಮತ್ತು ನಿಕ್ಕೋಲೊ ಡೆಲ್ ಅಬೇಟ್-ಇವರ ನೇತೃತ್ವದ ಮ್ಯಾನರಿಸಮ್ ಶೈಲಿಗೆ ದೊರೆ ಒಂದನೆಯ ಫ್ರಾನ್ಸಿಸ್‍ನ ಆಶ್ರಯ ಸಿಕ್ಕಿ ಫಾಂಟೇನ್ ಬ್ಲೂ ಪಂಥ ಸ್ಥಾಪಿತವಾಯಿತು. ಇದು ಕ್ರಮೇಣ ಅಭಿವೃದ್ಧಿ ಹೊಂದಿ ಫ್ರಾನ್ಸಿನಾದ್ಯಂತ ಮತ್ತು ನೆರೆಹೊರೆಯ ಪ್ರದೇಶಗಳಿಗೂ ಪ್ರಸರಿಸಿತು. ಈ ಪಂಥದವರು ಇಟಲಿಯ ಮ್ಯಾನರಿಸಮ್ ಶೈಲಿಯನ್ನು ಫ್ರೆಂಚ್ ಪದ್ಧತಿಗೆ ಅನುಗುಣವಾಗಿ ಅರ್ಥೈಸಿದರು.

	ಫ್ರಾನ್ಸೆಸ್ಕೋ ಪ್ರಿಮಾಟಿಷಿಯೋ (1504-70): ಈತ ಇಲ್‍ರೊಸ್ಸೋ ಪಂಥದವನಾಗಿದ್ದು ತನ್ನ ಗುರುವಿನ ಕೃತಿಗಳು ಫ್ರಾನ್ಸಿನ ಹೊಸಶೈಲಿಯತ್ತ ಮಾರ್ಪಡಲು ಮುಖ್ಯಕಾರಣನಾಗಿದ್ದ. ಈ ಪಂಥದ ಗಮನಾರ್ಹ ಕೃತಿ ಇಲ್ ರೊಸ್ಸೋನ ಪ್ರೇಮ ದೂಷಣೆ ವೀನಸ್ (ವೀನಸ್ ರಿಪ್ರೂವಿಂಗ್ ತಾವ್ 1530-40). ಇದರಲ್ಲಿ ನಿರೂಪಿಸಿರುವ ವರ್ಣಚಿತ್ರ ಮತ್ತು ಗಾರೆಯ ಶಿಲ್ಪಗಳ ನಿರೂಪಣೆಯಲ್ಲಿ ತಾಂತ್ರಿಕ ವ್ಯತ್ಯಾಸಗಳು ಎದ್ದುಕಾಣುತ್ತವೆ. ಹೆಣ್ಣು ಗೊಂಬೆಯಾಕಾರದ ಕಂಬಗಳನ್ನು (ಕ್ಯಾರಿಯಾಟಿಡ್) ಬಣ್ಣಗಳನ್ನು ಲೇಪಿಸಿ ಸುಂದರಗೊಳಿಸಲಾಗಿತ್ತು. ಆ ಕಂಬಗಳ ನಡುವಣ ಆಯಾಕಾರದ ಚೌಕಟ್ಟಿನೊಳಗಿನ ವರ್ಣಚಿತ್ರದಲ್ಲಿ ಇರುವ ಗೊಂಬೆಗಳು ಆಕರ್ಷಕ ದ್ವಿಪ್ರಮಾಣದ ಭಾವಪ್ರಧಾನ ಜೀವಂತ ಕೃತಿಗಳು; ಮ್ಯಾನರಿಸಮ್ ಶೈಲಿಯ ಉತ್ತಮ ನಿದರ್ಶನಗಳಾಗಿವೆ. ಹಿರಿಯ ಜೀನ್ ಕಸಿನ್ (ಮರಣ; 1560-61) ರಾಜಾಶ್ರಯರಹಿತನಾಗಿ ಕಾರ್ಯನಿರತನಾಗಿದ್ದರೂ ಈತನ ಈವಾಪ್ರಿಮಾ ಪಂದೋರಾ (ಸು.1535) ಮ್ಯಾನರಿಸಮ್ ಶೈಲಿಗೆ ಸೇರಿದ್ದು ಭಾವ ಪ್ರಧಾನವಾಗಿದೆ.

	17ನೆಯ ಶತಮಾನದಲ್ಲಿ ಫ್ರೆಂಚ್ ಕಲೆಗಾರರು ಇಟಲಿಯ ಪ್ರಭಾವಗಳನ್ನು ಹಿಂದಿನಂತೆ ಸ್ವೀಕರಿಸುತ್ತಿದ್ದರೂ ಕ್ರಮೇಣ ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರಲ್ಲಿ ಜಯಶೀಲರಾದರು. ಫ್ರೆಂಚ್ ಕಲೆಯ ಹಿರಿಮೆ ಬೆಳೆಯುತ್ತಿದ್ದಂತೆ ಕ್ರಮೇಣ ಯೂರೋಪೀಯ ಕಲಾರಂಗದಲ್ಲಿ ಇಟಲಿಯಿಂದ ನೇತೃತ್ವವನ್ನು ಕಸಿದು ಕೊಳ್ಳುವಂತಾಯಿತು. ಈ ಮಾರ್ಪಾಡಿಗೆ 13ನೆಯ ಲೂಯಿ ಮತ್ತು 14ನೆಯ ಲೂಯಿ ಅವರು ಯೂರೋಪಿನ ರಾಜಕೀಯದಲ್ಲಿ ಗಳಿಸಿಕೊಂಡ ಪ್ರಾಬಲ್ಯ ಮತ್ತು ಅವರು ಕಲೆಗೆ ನೀಡಿದ ಪ್ರಾಧಾನ್ಯವೇ ಕಾರಣ. 14ನೆಯ ಲೂಯಿಯ ಕಾಲದಲ್ಲಿದ್ದ ಹಲಕೆಲವು ನಿಬಂಧನೆಗಳು 18ನೆಯ ಶತಮಾನದಲ್ಲಿ ಸಡಿಲಗೊಂಡು ಕಲಾಭಿವೃದ್ಧಿಗೆ ಇನ್ನೂ ಹೆಚ್ಚು ಸ್ವಾತಂತ್ರ್ಯ ದೊರಕಿತು.

	17ನೆಯ ಶತಮಾನದ ಫ್ರೆಂಚ್ ಕಲೆಗಾರರು ನೆರೆಯ ಇಟಲಿಯಲ್ಲಿ ಸಂಭವಿಸುತ್ತಿದ್ದ ಮಾರ್ಪಾಟುಗಳನ್ನು ಗಮನಿಸುತ್ತಿದ್ದರೂ ಅವುಗಳ ಬಗ್ಗೆ ದಾಸ್ಯ ಮನೋಭಾವವನ್ನು ಹೊಂದಿರಲಿಲ್ಲ. ಜಾರ್ಜೆಸ್ ಡಿ ಲಾ ಟೂರ್ (1593-1652) ತನ್ನ ಕೃತಿಗಳಲ್ಲಿ ಕಪ್ಪು ಹಿನ್ನೆಲೆಯಲ್ಲಿ ಪ್ರಕಾಶಿಸುವ ಇಟಲಿಯ ಕಾರಲಾಗ್ಗಿಯೋ ರೀತಿಯಲ್ಲಿ ಕೃತಕ ಬೆಳಕಿನ ಛಾಯೆಯ ಚಿತ್ರಗಳ ನಿರೂಪಣೆಯಲ್ಲಿ ನಿಸ್ಸೀಮನಾಗಿದ್ದನಾದರೂ ಘನವಸ್ತು ನಿರೂಪಣೆಯಲ್ಲಿ ಸ್ವತಂತ್ರ ಪ್ರವೃತ್ತಿ ಹೊಂದಿದ್ದ. ಹೆಚ್ಚು ಬೌದ್ಧಿಕ ಪ್ರವೃತ್ತಿಯ ಇಟಲಿಯ ಕಲಾವಂತ ಕ್ಯರಾಕ್ಕಿಯ ಅನುಯಾಯಿಗಳು ಆ ಶತಮಾನದ ದ್ವಿತೀಯಾರ್ಧದಲ್ಲಿ ಪ್ರಮುಖರಾದರು. ಈ ಪ್ರವೃತ್ತಿಯ ಚಾಲ್ರ್ಸ ಲಬ್ರುನ್ ಆಗಿನ ದೊರೆ 14ನೆಯ ಲೂಯಿಯ ಆಕಾಂಕ್ಷೆಗಳಿಗೆ ಹೊಂದಿಕೊಂಡವನಾಗಿದ್ದು ದೊರೆ ಕಟ್ಟಿಸುತ್ತಿದ್ದ ವರ್ಸೇಲ್ಸ್ ಅರಮನೆಯ ಮತ್ತಿತರ ಮಂದಿರಗಳ ಅಲಂಕರಣಕ್ಕೆ ನೇಮಕಗೊಂಡ.

	ಅದೇ ಕಾಲದಲ್ಲಿದ್ದ ಲೂಯಿ ಲೆ ನೈನ್ (1593-1648) ಜನಸಾಮಾನ್ಯರಿಗೆ ಪ್ರಿಯವಾದ ರೈತ ಮತ್ತು ಕೂಲಿಕಾರರಿಗೆ ಸಂಬಂಧಿಸಿದ ವಸ್ತುಗಳನ್ನು ಆಯ್ದುಕೊಂಡು ತನ್ನ ಕೃತಿಗಳಲ್ಲಿ ಚಿತ್ರಿಸಿದ.

	ಆ ಕಾಲದ ಫ್ರಾನ್ಸಿನ ಇಬ್ಬರು ಖ್ಯಾತ ಚಿತ್ರಕಾರರಾದ ಪೌಸ್ಸಿನ್ ಮತ್ತು ಕ್ಲಾಡ್ ದೇಶಭ್ರಷ್ಟರಾಗಿ ಇಟಲಿಯಲ್ಲಿ ಆಶ್ರಯ ಪಡೆದಿದ್ದರು. ಇಟಲಿಯಲ್ಲಿಯ ಪರಿಸರದ ಪ್ರಭಾವವನ್ನು ಅವರ ಕೃತಿಗಳಲ್ಲಿ ಕಾಣಬಹುದಾದರೂ ತಮ್ಮ ತಾಯ್ನಾಡಿನ ಮನೋಭಾವ ಅವರ ಕೃತಿಗಳಲ್ಲಿ ಪ್ರಧಾನವಾಗಿ ಕಾಣುತ್ತದೆ. ನಿಕೊಲಾಸ್ ಪೌಸ್ಸಿನ್‍ನ (1594-1665) ಮೇಲೆ ಮೊದಲಿಗೆ ಟಿಟಿಯನ್, ಅನಂತರ ರಾಫೇಲನ ಪ್ರಭಾವ ಗಮನಾರ್ಹವಾಗಿ ಆಗಿದೆ. ಅವನ ಆರ್ಡಿನೇಷನ್‍ನಲ್ಲಿ (1647) ನಿರರ್ಗಳತೆಯೊಂದಿಗೆ ಹಿಡಿತದಲ್ಲಿಟ್ಟ ಭಾವ ಮತ್ತು ನಡೆವಳಿಕೆಗಳನ್ನು ವಸ್ತುರಚನೆಯಲ್ಲಿ ಬಹಳ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಅವನ ಕೃತಿಗಳಲ್ಲಿ ಪರಿಸರದ ಪ್ರಕೃತಿ ಸೌಂದರ್ಯಕ್ಕೆ ಪ್ರಾಧಾನ್ಯ ನೀಡಲಾಗಿದೆ. ಅವನ ಅನಂತರ ಕಾಲದ ಕೃತಿ ಫೋಸಿಯನ್ನನ ಅಂತ್ಯಕ್ರಿಯೆಯಲ್ಲಿ (1548) ಚಿತ್ರದ ಪ್ರತಿವಸ್ತುವನ್ನು ಸ್ಪಷ್ಟವಾಗಿ ಸ್ವತಂತ್ರವಾಗಿ ನಿರೂಪಿಸಿದ್ದರೂ ಅವೆಲ್ಲವುಗಳ ಸಾಮರಸ್ಯವಿದೆ.

	ಪೌಸಿನ್ನನ ಕೃತಿಗಳಿಂದ ಹೊರತಾದ ಪರಿಣಾಮವನ್ನು ಕ್ಲಾಡ್‍ಗಲ್ಲೀ ಅಥವಾ ಕ್ಲಾಡ್ ಲೊರೆನ್‍ನ (1600-82) ರಚನೆಗಳಲ್ಲಿ ಕಾಣಬಹುದು. ತರುಲತೆಗಳನ್ನೂ ಕಟ್ಟಡಗಳನ್ನೂ ತನ್ನ ಚಿತ್ರಗಳಿಗೆ ಚೌಕಟ್ಟಿನಂತೆ ಹೊಂದಿಸಿಕೊಂಡು ಪ್ರಕಾಶಮಾನ ಬಾಂದಳವನ್ನು ಹಿನ್ನಲೆಯಾಗಿಸಿಕೊಂಡು ರಚಿಸಿದ ಈತನ ಕೃತಿಗಳು ರೊಮ್ಯಾಂಟಿಕ್ ಪಂಥದವರ ಮೆಚ್ಚುಗೆ ಗಳಿಸಿದುವು.

	ರೊಕೋಕೊ ಶೈಲಿಯ ಹಗುರತನ ಮತ್ತು ತಿಳಿಗೇಡಿತನಗಳ ಅಂಶಗಳು 18ನೆಯ ಶತಮಾನದ ಚಿತ್ರಗಳಲ್ಲಿ ಪ್ರಧಾನವಾಗಿದೆ. ಈ ಚಿತ್ರಗಳು ವಾಸ್ತುಶಿಲ್ಪ ಶೈಲಿಯ ಆನಂದದಾಯಕ, ಪ್ರಕಾಶಮಾನ, ಅಲಂಕೃತ ವಕ್ತ್ರಗತಿಯೊಂದಿಗೆ ಸಾಮರಸ್ಯ ಪಡೆದಿವೆ. ಫ್ರಾಂಕಾಯಿಸ್ ಬೂಷರ್‍ನ (1703-70) ರಚನೆಗಳನ್ನು ಅವುಗಳ ನಿರ್ದಿಷ್ಟ ಸನ್ನಿವೇಶದಲ್ಲಿ ಅವಲೋಕಿಸಿದಾಗ ಇಡೀ ಚಿತ್ರ ರಚನೆ ಸಂವೇದನಾತ್ಮಕ ಆಹ್ಲಾದವನ್ನು ಒದಗಿಸುತ್ತವೆ. ಈ ಶೈಲಿ ಅತ್ಯಾಕರ್ಷಕ ರಚನೆಗಳನ್ನು ಜೀನ್ ಹೊನೂರ್ ಫ್ರಾಗೊನಾರ್ಡನ (1732-1806) ಕೃತಿಗಳಲ್ಲಿ ಕಾಣಬಹುದು.

	ಆ ಕಾಲದ ಫ್ರೆಂಚರ ವಿಖ್ಯಾತ ಚಿತ್ರಕಾರ (1684-1721) ಆಂಟಾಯ್ನ್ ವಾಟ್ಟೋನ ಅತ್ಯುತ್ತಮ ಕಲಾಕೃತಿ ಸಿತೆರಾಗೆ ನೌಕಾಯಾನದಲ್ಲಿ (ಎಂಬಾರ್ಕೇಷನ್ ಫಾರ್ ಸಿತೆರಾ, 1717) ಅಕೃತಿಮವಾದ ಆಸ್ಥಾನಮೂಲದ ಸೊಗಸುಗಾರಿಕೆಯನ್ನು ನಿರೂಪಿಸಲಾಗಿದೆ. ಅವನ ರಚನೆಯಲ್ಲಿ ಬೇರಾವ ರೊಕೋಕೊ ಚಿತ್ರಕಾರನಲ್ಲೂ ಇಲ್ಲದ ದೃಶ್ಯಕ ಮತ್ತು ಭಾವುಕ ಸೂಚನೆಗಳ ವಿಪುಲತೆ ಎದ್ದುಕಾಣುತ್ತದೆ. ಆಗಿನ ಮತ್ತೊಬ್ಬ ಪ್ರಮುಖ ಚಿತ್ರಕಾರ ಜೀನ್ ಬ್ಯಾಪ್ಟಿಸ್ಟೆ ಸಿಮಿಯೊನ್ ಜಾರ್ಡಿನ್ (1699-1779) ಲೆ ನೈನ್ ಸಂಪ್ರದಾಯದ ಪ್ರಕಾರ ಮಧ್ಯಮ ವರ್ಗದವರ ಗೃಹಜೀವನವನ್ನು ವಸ್ತುವಾಗಿ ಬಳಸಿಕೊಂಡು, ತನ್ನ ಹಿಂದಿನವರಿಗಿಂತಲೂ ತನ್ನ ಕೃತಿಗಳಲ್ಲಿ ಚೆನ್ನಾಗಿ ನಿರೂಪಿಸಿದ್ದಾನೆ, ಅವನ ಕೃತಿ ನಿಶ್ಚಲಜೀವನದಲ್ಲಿ (ಸ್ಟಿಲ್‍ಲೈಫ್ ಸು. 1760) ಈ ಅಂಶಗಳ ಪರಿಣಾಮಕಾರಿ ನಿರೂಪಣೆಯನ್ನು ಕಾಣಬಹುದು. ಆಧುನಿಕ ಯುಗದಲ್ಲಿ ಫ್ರಾನ್ಸಿನ ರಾಜಕೀಯ ಸಾಮಾಹಿಕ ವಿಚಾರಗಳು ಕಲೆಯ ಮೇಲೆ ಸ್ವಾಭಾವಿಕವಾಗಿಯೇ ತಮ್ಮ ಪ್ರಭಾವ ಬೀರಿದವು. ಮಧ್ಯಮವರ್ಗದವರು ಶ್ರೀಮಂತವರ್ಗ ಅರಸು ಮನೆತನ ಮತ್ತು ಪುರೋಹಿತವರ್ಗದವರ ದಬ್ಬಾಳಿಕೆ ಶೋಷಣೆಗಳ ವಿರುದ್ಧ ಪ್ರತಿಭಟಿಸಿದುದರ ಛಾಯೆ ಚಿತ್ರಕಲೆಯಲ್ಲಿ ಕಾಣಬಂದಿದೆ. ಆ ಕಾಲದ ಮೊದಲ ಚಿತ್ರಕಾರ ಜಾಕ್ವೆಸ್‍ಲೂಯಿ ಡೇವಿಡ್ (1784-1825) ಎಂಬಾತನನ್ನು ನವ ಅಭಿಜಾತ ಶೈಲಿಯ ಆದ್ಯಪ್ರವರ್ತಕನೆಂದು ಪರಿಗಣಿಸಲಾಗಿದೆ ಫ್ರಾನ್ಸಿನ ಮಹಾಕ್ರಾಂತಿಗೆ ಮುನ್ನ ರಚಿಸಿದ ಆತನ ಹಲವಾರು ಚಿತ್ರಗಳು ರೋಮನ್ ಮೂರ್ತಿಶಿಲ್ಪಗಳ ಪ್ರಭಾವ ತೋರುತ್ತವೆ. ಅವನ ಚಿತ್ರಗಳು ಉಬ್ಬುಚಿತ್ರಗಳ ಭಾವನೆಯನ್ನು ಉಂಟುಮಾಡುತ್ತವೆ. ಅವನಿಗೆ ಕ್ರಾಂತಿಯ ತರುವಾಯ ಗಣರಾಜ್ಯದ ಅಧಿಕೃತ ಚಿತ್ರಶಿಲ್ಪಿಯ ಗೌರವ ದೊರಕಿತು; ಅವನ ಚಿತ್ರ ರಚನೆಯಲ್ಲಿ ಸ್ಪಷ್ಟತೆ ಮತ್ತು ಪ್ರಾಚೀನ ವಿಧಾನಗಳ ವ್ಯವಸ್ಥೆ ಮೆಚ್ಚುಗೆಗಳಿಸುವಂತಿದ್ದವು. ಜೆ.ಎ.ಡಿ ಇಂಗ್ರೆಸ್ (1780-1867) ನವ ಅಭಿಜಾತ ಪದ್ಧತಿಯ ಅಂತಿಮ ಪ್ರತಿನಿಧಿ, ಡೇವಿಡನ ಹಿಂಬಾಲಕರಲ್ಲಿ ಪ್ರಮುಖನಾದ ಅವನು ಫ್ರಾನ್ಸಿನಲ್ಲಿ ಸಂಪ್ರದಾಯ ಶರಣರ ಗುಂಪಿಗೆ ನೇತಾರ, ಅವನ `ಶ್ರೀಮತಿ ರಿವೆರಿ (1805) ಆ ಕಾಲದ ಉತ್ತಮ ಕೃತಿ, ಅನಂತರ ಅಧಿಕಾರಶಾಹಿಯ ನೇತೃತ್ವದಲ್ಲಿ ಬೆಳೆದ ಚಿತ್ರ ನಿರ್ಮಾಣದಲ್ಲಿ ಗುಣರಹಿತ ಸಾಮಾನ್ಯ ರಚನೆಗಳು ಹೆಚ್ಚಾದುವು. ಮೊದಲ ನೋಟಕ್ಕೆ ಡೇವಿಡ್ ಮತ್ತು ಇಂಗ್ರೆಸ್‍ರ ಅನುಕರಣೆಯಂತೆ ಕಂಡರೂ ಪಿಯರೆ ಪುವಿ ಡಿ ಚವಾನೆಯ (1824-98) ರಚನೆಗಳಲ್ಲಿ ಒಂದು ರೀತಿಯ ಸ್ವಂತಿಕೆಯಿದೆ. ಆಧುನಿಕ ಭಿತ್ತಿಚಿತ್ರಗಳಿಗೆ ಆತನ ಕೊಡುಗೆ ಮಹತ್ತ್ವಪೂರ್ಣವಾದದ್ದು. ಈ ಪಂಥಕ್ಕೆ ವಿರುದ್ದವಾದ ಪದ್ಧತಿಯನ್ನು 1891 ರಲ್ಲಿ ತಿಯೋಡಾರ್ ಗೆರಿಕಾಲ್ಟನ (1791-1824) ಮೆಡುಸಾದ ದೋಣಿ ಚಿತ್ರದಲ್ಲಿ ಕಾಣಬಹುದು. ಉತ್ತಮ ಆಫ್ರಿಕಕ್ಕೆ ವಲಸೆ ಹೋಗುತ್ತಿದ್ದ ನೂರಾರು ಫ್ರೆಂಚರು ಹಡಗಿನ ದುರಂತಕ್ಕೀಡಾದುದು ಈ ಚಿತ್ರದ ವಸ್ತು. ಗೆರಿಕಾಲ್ಟ್ ರೊಮ್ಯಾಂಟಿಕ್ ಅಥವಾ ಭಾವನಾ ಪ್ರಧಾನ ಪದ್ಧತಿಯ ಮುಖ್ಯ ಸಂಚಾಲಕನೆಂದು ಪರಿಗಣಿಸಲಾಗಿತ್ತು. ಆ ಪಂಥವನ್ನು ಅನಂತರ ಯೂಜೀನ್ ಡೆಲಾಕ್ರಾಯಿಕ್ಸ್ (1798-1863) ಮುಂದುವರಿಸಿದೆ. ಸಮರ್ಥನಾದ ಡೆಲಾಕ್ರಾಯಿಕ್ಸ್ ಪ್ರಭಾವಶಾಲಿ ಇಂಗ್ರೆಸ್ ಮತ್ತು ಅವನ ಅನುಯಾಯಿಗಳನ್ನು ಪರಿಣಾಮಕಾರಿಯಾಗಿ ಎದುರಿಸಿದನೆಂದೇ ಹೇಳಬಹುದು. ಎರಡು ಪಂಥಗಳವರಿಗೂ ವಸ್ತು ಒಂದೇ ರೀತಿಯದಾದರೂ ಅದರ ನಿರೂಪಣೆ ಮತ್ತು ಅಭಿವ್ಯಕ್ತಿಯಲ್ಲಿ ಮೌಲಿಕ ವ್ಯತ್ಯಾಸಗಳಿದ್ದುದು ಕಾಣುತ್ತೇವೆ. ಡೆಲಾಕ್ರಾಯಿಕ್ಸನ ಕೃತಿ ಕಾನ್‍ಸ್ಟಾಂಟಿನೋಪಲ್ ಒಳಕ್ಕೆ ಧರ್ಮಯೋಧರ ಪ್ರವೇಶ (1840) ಇದಕ್ಕೆ ಉತ್ತಮ ನಿದರ್ಶನ. ಆದರೆ ಈ ಎರಡು ಪಂಥದವರು ಸಮಕಾಲೀನ ಜೀವನಕ್ಕೆ ಸಂಬಂಧಿಸಿದ ವಸ್ತುಗಳನ್ನು ತಮ್ಮ ಕೃತಿಗಳಿಗೆ ಹೆಚ್ಚಾಗಿ ಆಯ್ದುಕೊಳ್ಳುತ್ತಿರಲಿಲ್ಲ.

	ಬಾರ್ಬಿಜಾನ್ ಬಳಿ ನೆಲೆಸಿದ್ದ ಕೆಲವು ಚಿತ್ರಕಾರರು ನಿಸರ್ಗದೃಶ್ಯ ಮತ್ತು ವ್ಯಕ್ತಿ ಚಿತ್ರಣಗಳಿಗೆ ಆದ್ಯತೆ ನೀಡಿದರು. ಅವರಲ್ಲಿ ತಿಯೋಡಾರ್ ರೂಸ್ಸೋ (1812-67) ಮತ್ತು ಜೀನ್ ಫ್ರಾಂಕಾಯಿಸ್ ಮಿಲ್ಲೆಟ್ (1814-75) ಪ್ರಮುಖರು. ರೂಸ್ಸೋ ಹೊರಗಡೆ ವೀಕ್ಷಿಸಿದ ನಿಸರ್ಗ ದೃಶ್ಯಗಳನ್ನು ಕಲಾಶಾಲೆಯಲ್ಲಿ ಪುನವ್ರ್ಯವಸ್ಥೆಗೊಳಿಸಿ ನಿರೂಪಿಸುತ್ತಿದ್ದ. ಮಿಲ್ಲೆಟ್ ಲೂಯಿ ಲೆ ನೈನ್ ಮಾದರಿಯ ನೈಜ ವಸ್ತು ನಿರೂಪಣೆಗೆ ಪ್ರಾಶಸ್ತ್ಯ ನೀಡಿದ್ದ. ಅವನು ಸಮಾಜವಾದಿಯೆಂಬ ಅಪವಾದವಿದ್ದರೂ ಜನಸಾಮಾನ್ಯರ ಜೀವನದಲ್ಲಿರುವ ಉತ್ತಮಾಂಶಗಳ ಪ್ರತಿಪಾದನೆ ಅವನ ಗುರಿಯಾಗಿತ್ತೆಂದು ಹೇಳಬಹುದು. ಕ್ಯಾಮಿಲ್ಲೆ ಕೊರೊಟ್ (1796-1875) ತನ್ನದೇ ಆದ ವಿಶಿಷ್ಟ ನಿಸರ್ಗ ನಿರೂಪಣಾ ಮಾರ್ಗವನ್ನು ಅನುಸುರಿಸಿದ್ದ, ಅವನ ಕೆಲವು ಚಿತ್ರಗಳು ಅನಂತರ ಕಾಲದ ಛಾಯಚಿತ್ರಗಳಂತೆ ಕಾಣುತ್ತವೆ. ಅವನ ರೊಚೆಲ್‍ಬಂದರು (1851) ಇದರಲ್ಲಿ ಕಪ್ಪು-ಬಿಳುಪು ಬಣ್ಣಗಳ ಪ್ರಾಧಾನ್ಯ. ನಿಧಾನ ಚಲನೆಯ ವ್ಯಕ್ತಿಗಳ ನಿರೂಪಣೆ ಅನಂತರ ಕಾಲದ ಸಮಷ್ಟಿ ಪರಿಣಾಮ ಶೈಲಿಯ ಮುನ್ ಸೂಚಕವಾಗಿತ್ತು.

	ಆ ಸುಮಾರಿಗೆ ಪ್ಯಾರಿಸ್ ನಗರದಲ್ಲಿ ಸಂಭವಿಸುತ್ತಿದ್ದ ರಾಜಕೀಯ-ಸಾಮಾಜಿಕ ವಿಪ್ಲದ ನಾಟರ್‍ಡೇಮಿನ ಹೊನೊರ್ ಡಾಮಿಯರ್‍ನ (1808-79) ಕೃತಿಗಳಲ್ಲಿ ಎದ್ದು ಕಾಣುತ್ತದೆ. ಅವನು ರಚಿಸಿದ ಸಾವಿರಾರು ವ್ಯಂಗ್ಯ ಚಿತ್ರಗಳು ಹಲವಾರು ನಿಯತಕಾಲಿಕಗಳಲ್ಲಿ ಪ್ರಚುರಗೊಂಡದ್ದವು. ಕಲ್ಲಚ್ಚಿನ ಚಿತ್ರಗಳು ಬಹಳ ಪ್ರಸಿದ್ಧಿ ಪಡೆದಿದ್ದವು. ತೈಲಚಿತ್ರಗಳಲ್ಲಿ ಕಂಡುಬರುವ ನಕಾಸೆ ಕೆಲಸ ಗಮನಾರ್ಹ ಗುಸ್ಟೆವ್ ಕೌರ್ಬೆಟ್‍ನ (1819-77) ಸಮಕಾಲೀನ ಜನಜೀವನದಿಂದ ಆಯ್ದ ಚಿತ್ರ ವಸ್ತುಗಳು ಹೆಚ್ಚು ದಾಷ್ಟ್ರ್ಯದಿಂದ ಕೂಡಿವೆ. ಅವನನ್ನು ಸಮಾಜವಾದಿಯೆಂದು ದೂಷಿಸಲಾಯಿತು. ಅವನ ಓರ್ನಾನ್ಸಿನಲ್ಲಿ ಸಮಾಧಿ (1849, ಲೂರ್ ಸಂಗ್ರಹಾಲಯ) ಮತ್ತು ಕಲ್ಲು ಒಡೆಯುವವರು (1849) ಇವುಗಳಲ್ಲಿನ ನಿರೂಪಣಾ ಕೌಶಲ ಮೆಚ್ಚಲರ್ಹವಾಗಿದೆ.

	ನೈಸರ್ಗಿಕ ಪಂಥ ತನ್ನ ಪರಿಪೂರ್ಣತೆಯನ್ನು ಎಡೊವರ್ಡ್ ಮಾನೆಯ (1832-83) ಕೃತಿಗಳನ್ನು ಕಂಡುಕೊಂಡಿತು. ಈ ಪಂಥವನ್ನು ಸಮಷ್ಟಿ ಪರಿಣಾಮ ಪದ್ಧತಿಯ ಚಿತ್ರಗಳಿಗೆ ಪ್ರದರ್ಶನದಲ್ಲಿ ಅವಕಾಶ ನೀಡದಿದ್ದುದರಿಂದ ಉಂಟಾದ ಗಲಭೆಯ ಕಾರಣದಿಂದ ಸರ್ಕಾರ ಅವರ ಕೃತಿಗಳಿಗೆ ಪ್ರತ್ಯೇಕ ಚಿತ್ರಪ್ರದರ್ಶನವನ್ನು 1863ರಲ್ಲಿ ಏರ್ಪಡಿಸಬೇಕಾಯಿತು. ಆ ಪಂಥದ ಕ್ಲಾಡ್‍ಮೊನೆ (1840-1826) ತನ್ನ ಡೆಜ್ಯೂನರ್ ಸರ್ ಲಹರ್ಬ್ ಚಿತ್ರದಲ್ಲಿ ನಗ್ನಸ್ತ್ರೀ ಮತ್ತು ವಸ್ತ್ರ ಧರಿಸಿದ ಇಬ್ಬರು ಪುರುಷರನ್ನು ನಿರೂಪಿಸಿ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡಿದ. ಅವನು ಬರೆದ ಮತ್ತೊಂದು ಚಿತ್ರ ಒಲಂಪಿಯ ನಗ್ನತೆಯನ್ನು ತೋರಿಸುತ್ತಿದ್ದರೆ ಇನ್ನೊಂದು ಚಿತ್ರ ಸತ್ತ ಕ್ರಿಸ್ತ ಮತ್ತು ದೇವದೂತರು (1864) ನಗ್ನತೆಯ ಛಾಯೆಯನ್ನು ಬೀರುತ್ತದೆ. ಅವನ ಅನುಯಾಯಿಗಳಲ್ಲಿ ಎಡ್ಗಾರ್ ಡೆಗಾಸ್ (1834-1917) ಕ್ಯಾಮಿಲಿ ಪಿಸ್ಸಾರೊ (1830-1903), ಆಗಸ್ಟ್ ರಿನಾಯಿರ್ (1841-1919) ಪ್ರಮುಖರು. ಇವರು ಬಾಹ್ಯಾಂಗಣದಲ್ಲಿ ನೇರವಾಗಿ ನಿಸರ್ಗ ಚಿತ್ರಗಳನ್ನು ನಿರೂಪಿಸಲಾರಂಭಿಸಿದರು. ಆದರೆ 1874-86ರಲ್ಲಿ ನಡುವೆ ನಡೆದ ಅವರ ಎಂಟು ಸಹಕಾರಿ ಚಿತ್ರಪ್ರದರ್ಶನಗಳು ಸಾರ್ವಜನಿಕರ ಅನಾದರಣೆಗೆ ಪಾತ್ರವಾದವು. ಕ್ಲಾಡ್‍ಮಾನೆ ವರ್ಣರಂಜನೆಯ ಪರಿಣಾಮಗಳನ್ನು ರೂವಿನ್ ಕೆತೆಡ್ರಲ್‍ನ ಇಪ್ಪತ್ತಾರು ಪ್ರತ್ಯೇಕ ಚಿತ್ರಗಳಲ್ಲೂ ಮತ್ತು ವಾಟರ್ಲೂ ಸೇತುವೆಯ ಹದಿನಾರು ದೃಶ್ಯಗಳಲ್ಲೂ (1903) ಮನೋಜ್ಞವಾಗಿ ನಿರೂಪಿಸಿದ್ದಾನೆ. ಈ ಚಿತ್ರಗಳಲ್ಲಿ ಒಂದೇ ವಸ್ತುವನ್ನು ಹಗಲಿನ ಬೇರೆ ಬೇರೆ ಕಾಲಗಳಲ್ಲಿ ವೀಕ್ಷಿಸಿದಾಗ ಕಾಣುವ ಭಿನ್ನ ಭಿನ್ನ ಬಣ್ಣದ ದೃಶ್ಯಗಳನ್ನು ನಿರೂಪಿಸಲಾಗಿದೆ. ಅವನ ಅಂತಿಮ ಚಿತ್ರ ಫಾಲೇಸ್-ಬೆರ್ಜೆರಿಸ್‍ನಲ್ಲಿಯ ಪಾನಶಾಲೆ (1882) ಅವನ ಇತರ ಚಿತ್ರಗಳಿಗಿಂತ ಸ್ವಲ್ಪ ಭಿನ್ನವಾದರೂ ಉತ್ತಮ ಚಿತ್ರಗಳಲ್ಲೊಂದಾಗಿದೆ.

	1886ರ ವೇಳೆಗೆ ಸಮಷ್ಟಿ ಪಂಥದವರನ್ನು ಗಂಭೀರ ಚಿತ್ರಕಾರರೆಂದು ಒಪ್ಪಿಕೊಳ್ಳಲಾಯಿತು. ಅದೇ ವೇಳೆಗೆ ಈ ಬೆಳವಣಿಗೆಗಳಿಂದ ಸಾಂಪ್ರದಾಯಿಕ ವಸ್ತು ಚಿತ್ರಣವನ್ನು ಕಡೆಗಣಿಸಲಾಗಿದೆಯೆಂಬ ಭಾವನೆ ಹೊಸಚಿತ್ರಕಾರರಲ್ಲಿ ಉಂಟಾದಂತೆ ಕಾಣುತ್ತದೆ. ರಿನಾಯಿರ್ ಸಾಂಪ್ರದಾಯಿಕ ರೀತಿಯ ಪುನರ್ ಅಧ್ಯಯವನ್ನು ಕೈಗೊಂಡ, ಸ್ಯುರಾಟ್, ಸೆಜೆನ್ನೆ, ವಾನ್, ಗೋಘ್ ಮತ್ತು ಗಾಗಿನ್ ಅವರು ತ್ರಿಪ್ರಮಾಣ ಸ್ಥಳನಿರೂಪಣೆ, ರೇಖೆಯ ಅಭಿವ್ಯಕ್ತತೆ, ವಿನ್ಯಾಸ, ವರ್ಣ ಮತ್ತು ವಿಷಯದ ಸಾಂಕೇತಿಕ ನಿರೂಪಣೆಗಳ ಬಗ್ಗೆ ವಿಶ್ಲೇಷಣಾಕಾರ್ಯ ಕೈಗೊಂಡರು. ಇವರ ಕೃತಿಗಳು ಸಮಷ್ಟಿ ಪರಿಣಾಮವಾದಿಗಳ ರಚನೆಗಳಿಂದ ಗಮನಾರ್ಹವಾಗಿ ಬೇರ್ಪಟ್ಟಿರುವುದರಿಂದ ಇವರನ್ನು ಅನಂತರ ಹಂತಕ್ಕೆ ಸೇರಿಸಲಾಗಿದೆ.

	ಸುರ್ಯಾಟ್ (1859-91) ತನ್ನ ಗ್ರಾಂಡ್ ಜಟ್ಟಿ ದ್ವೀಪದಲ್ಲಿ ರವಿವಾರದ ಮಧ್ಯಾಹ್ನ (1884-86) ಚಿತ್ರದಲ್ಲಿ ವಿಹಾರ ವಿಷಯಗಳಲ್ಲಿ ಈ ಪಂಥದವರಿಗಿದ್ದ ಆಸಕ್ತಿಯನ್ನು ಸೂಚಿಸಿದ್ದಾನೆ. ಈ ಚಿತ್ರದಲ್ಲಿ ವಿವಿಧ ಬಣ್ಣಗಳ, ಬೆಳಕಿನ ಛಾಯೆಗಳ ಸಾಮರಸ್ಯ, ವ್ಯಕ್ತಿ-ವೃಕ್ಷಗಳ ಲಂಬತೆ, ಅವುಗಳ ನೆರಳಿನ ಸಮತಲತೆ, ಮತ್ತು ಕರ್ಣರೇಖೆಗಳು ಪ್ರೇಕ್ಷಕರ ಮೇಲೆ ಬೀರುವ ಪರಿಣಾಮಗಳನ್ನು ಬಹಳ ಶಕ್ತಿಯುತವಾಗಿ ನಿರೂಪಿಸಿದ್ದಾನೆ. ಅದರೊಂದಿಗೆ ವ್ಯಕ್ತಿಗಳ ಚಲನಗತಿಯನ್ನು ಕಾಣಬಹುದಾಗಿದೆ. ಪಾಲ್ ಸಸೆನ್ನೆ (1839-1906) ಮೊದಲಿಗೆ ತನ್ನ ಕೃತಿಗಳಲ್ಲಿ ವಿಷಯ ಆಯ್ಕೆಯಲ್ಲಿ ರೊಮ್ಯಾಂಟಿಸಿಸಮ್ ಭಾವನೆಗಳನ್ನು ವಿನ್ಯಾಸದಲ್ಲಿ ಬರೋಕ್ ಶೈಲಿಯನ್ನೂ ಅಳವಡಿಸಿಕೊಂಡಿದ್ದ. ಕಾಲಾನುಕ್ರಮದಲ್ಲಿ ಪಿಸ್ಸಾರೊವಿನ ಪ್ರಭಾವಕ್ಕೊಳಗಾದ ಅನಂತರ ಆ ಪದ್ಧತಿಯನ್ನು ಅನುಸರಿಸಲಾರಂಭಿಸಿದ. ಆದರೂ ಅವನ ಕೃತಿಗಳಲ್ಲಿ ಹೊಸದಾದ ಕೆಲವು ಅಂಶಗಳು ಕಾಣುತ್ತವೆ. ಪ್ರಸ್ತುತ ವೈಜ್ಞಾನಿಕ ವಿಶ್ಲೇಷಣ ದೃಷ್ಟಿಯನ್ನು ಅವನ ಕೃತಿಗಳಲ್ಲಿ ಕಾಣಬಹುದು. ಅವನ ಕೃತಿಗಳಲ್ಲಿ ಯಥಾದೃಷ್ಟರೂಪಣಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಅನೇಕ ಬಾರಿ ಪ್ರತ್ಯೇಕ ಯಥಾದೃಷ್ಟ ರೂಪಣಗಳನ್ನು ಪರಿಣಾಮಕಾರಿಯಾಗಿ ಸಂಯೋಜನೆಗೊಳಿಸಲಾಗಿದೆ. ಇಂಥ ಸಂಯೋಜಿತ ನಿರೂಪಣೆಯನ್ನು ಅವನ ಸ್ಟಿಲ್ ಲೈಫ್(1890)ನಲ್ಲಿ ಕಾಣಬಹುದು. ಅವನ ನಿಸರ್ಗ ಚಿತ್ರಗಳಲ್ಲಿ ಮಾಂಟ್-ಸೇಂಟ್-ವಿಕ್ಟಾರ್ (1885-87) ಗಮನಾರ್ಹ, ದೈನಂದಿನ ಜೀವನ ಘಟನೆಗಳ ನಿರೂಪಣೆಯನ್ನು ಇಸ್ಪೀಟಾಟಗಾರರು (1892) ಚಿತ್ರದಲ್ಲಿ ಕಾಣಬಹುದು. ಅಲ್ಲದೆ ಅನೇಕ ಭಾವಚಿತ್ರಗಳನ್ನು ರಚಿಸಿದ್ದಾನೆ.

ವಿನ್ಸೆಂಟ್ ವಾನ್ ಗೋ (1853-90) ಈತ ಜನ್ಮತಃ ಹಾಲೆಂಡಿನವ. ಆರಂಭಿಕ ಜೀವನದಲ್ಲಿ ಕೈಗೊಂಡ ಹಲವು ವೃತ್ತಿಗಳಲ್ಲಿ ವಿಫಲಗೊಂಡ ಬಳಿಕ ಚಿತ್ರ ಕಲೆಯಲ್ಲಿ ಸಾರ್ಥಕತೆ ಕಂಡ. ತನ್ನ ಪ್ರತಿಯೊಂದು ಚಿತ್ರ ಯಾವುದೋ ಸಂಕೇತದ ತಾತ್ತ್ವಿಕ ನಿರೂಪಣೆಯೆಂದು ಭಾವಿಸಿದವ. ಈತ ಅಕಾಲಮರಣಕ್ಕೆ ತುತ್ತಾಗುವ ಮುನ್ನ ರಚಿಸಿದ ವೀಟ್ ಫೀಲ್ಡ್ ವಿತ್ ಬ್ಲಾಕ್ ಬಡ್ರ್ಸ್ (1890) ಒಂದು ಗಮನಾರ್ಹ ಕೃತಿ.

	ಪಾಲ್ ಗಾಗಿನ್ (1843-1903) ವಸ್ತುನಿಷ್ಠ ನಿರೂಪಣೆಗಳಿಗಿಂತ ಭಾವನಾತ್ಮಕ ನಿರೂಪಣೆಗಳಿಗೆ ಪ್ರಾಶಸ್ತ್ಯ ಕೊಟ್ಟಿದ್ದರೂ ವಾನ್ ಗೋಘನಿಂದ ಈತ ಬೇರೆಯಾಗಿದ್ದಾನೆಂದು ಹೇಳಬಹುದು. ಮೊದಲಿಗೆ ಕಲಾಹವ್ಯಾಸಿಯಾಗಿದ್ದರೂ ಪಿಸ್ಸಾರೋನಿಂದ ಇಡೀ ವೇಳೆಯನ್ನು ಕಲೆಗೆ ನಿವೇದಿಸಿಕೊಂಡ ಬಳಿಕ ಜೀವನ ನಿರ್ವಹಣೆ ಕಷ್ಟವಾದರೂ ಕಲಾ ಜೀವನವನ್ನು ತ್ಯಜಿಸಲಿಲ್ಲ. ಈತನ ಹಳದಿ ಕ್ರಿಸ್ತ (1859) ಚಿತ್ರದಲ್ಲಿ ಜನಪದ ಶಿಲ್ಪಶೈಲಿಯ ಸಂಯೋಜನೆ ಕಾಣಬಹುದು. ಈತನ ರಚನೆಗಳಲ್ಲಿ ಪೌರಸ್ತ್ಯ ಹಾಗೂ ಪಾಶ್ಚಾತ್ಯ ಭಾವನೆಗಳ ಮಿಶ್ರಣವಿದೆ. ತಹಿತಿಯ ಸ್ತ್ರೀಯೊಬ್ಬಳನ್ನು ಚಿತ್ರಿಸಿರುವ ಈತನ, `ತಾಯ್ತನ ಚಿತ್ರ (1896) ಒಂದು ಉತ್ತಮ ಕೃತಿ.

	19ನೆಯ ಶತಮಾನದಂತ್ಯದಲ್ಲಿ ಬೌದ್ಧಿಕ ಕ್ರಾಂತಿಯುಗದ ವೃತ್ತಿನಿರತ ಕಲೆಗಾರರ ಸ್ಥಾನದಲ್ಲಿ ವ್ಯವಸ್ಥಿತ ಕಲಾಶಾಲೆಗಳಲ್ಲಿ ತರಬೇತಿ ಪಡೆದ ಹೊಸ ಪೀಳಿಗೆಯ ನೂರಾರು ಅನನುಭವಿ ಚಿತ್ರಕಾರರು ತಲೆ ಎತ್ತಿದರು. ತಾಂತ್ರಿಕವಾಗಿ ಇವರ ಕೃತಿಗಳಲ್ಲಿ ಖಂಡನಾರ್ಹ ಅಂಶಗಳಿಲ್ಲವಾದರೂ ಅವು ಮಂಕಾಗಿವೆ. ಇಂಥ ಹವ್ಯಾಸಿ ಕಲಾವಿದರಲ್ಲಿ ಗಮನಾರ್ಹನಾದವ ಹೆನ್ರಿ ರೋಸ್ಸೋ (1844-1910). ಅವನ ಜಲಪಾತ (1910) ಕೃತಿಯಲ್ಲಿ ಬಣ್ಣಗಳನ್ನು ಮತ್ತು ಆಕೃತಿಗಳನ್ನು ಆಕರ್ಷಕ ರೀತಿಯಲ್ಲಿ ನಿರೂಪಿಸುವ ಅಸಾಧಾರಣ ಪ್ರತಿಭೆ ಕಾಣಬಹುದು. ಅವನಿಗೆ ಆ ಕಾಲದ ವೃತ್ತಿನಿರತ ಚಿತ್ರಕಾರದಿಂದ ಪುರಸ್ಕಾರ ಸಿಕ್ಕಲಿಲ್ಲವಾದರೂ ಅನಂತರದ ಚಿತ್ರಕಾರರು ಅವನ ಪ್ರತಿಭೆಯನ್ನು ಮೆಚ್ಚಿದರು.

	18-19ನೆಯ ಶತಮಾನಗಳ ಫ್ರೆಂಚ್ ಚಿತ್ರಕಲೆಯಲ್ಲಿ ಕಾಣುವ, ಪರಂಪರಾನುಗತ ಪದ್ಧತಿ ಭಿನ್ನ, ಮಾನಸಿಕ ಪ್ರವೃತ್ತಿಗಳು ಆ ಕಲೆಯನ್ನು ಅಮರವಾಗಿಸಿವೆ.
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ